ಹನ್ನೆರಡನೆಯ ಶತಮಾನದ ವಚನಸಾಹಿತ್ಯವು, ತನ್ನ ಸರಳತೆ ಮತ್ತು ಪಾರದರ್ಶಕತೆಗಳಿಗಾಗಿ
                                            ಪ್ರಸಿದ್ಧವಾಗಿದೆ. ಬಹಳ ಸಂಕೀರ್ಣವಾದ ವಿಚಾರಗಳನ್ನು ಮತ್ತು ತಾತ್ವಿಕವಾದ ಪ್ರಮೇಯಗಳನ್ನು ಸಂವಹನ ಮಾಡುವ
                                            ಸಾಮರ್ಥ್ಯವು ಕನ್ನಡಕ್ಕೆ ಇದೆಯೆಂದು ತೋರಿಸಿಕೊಟ್ಟಿರುವುದು, ವಚನಗಳ ಹಿರಿಮೆ. ಆದರೆ. ಅನೇಕ ವಚನಗಳನ್ನು,
                                            ಒಗಟುಗಳ ಹಾಗೆ ಸಮಸ್ಯಾತ್ಮಕವಾಗಿ ರಚಿಸಲಾಗಿದೆ. ಅವುಗಳನ್ನು ಬೆಡಗಿನ ವಚನಗಳೆಂದು ಕರೆಯಲಾಗಿದೆ. ಬೆಡಗು
                                            ಎಂದರೆ, ಸೌಂದರ್ಯ, ಆಕರ್ಷಕತೆ, ಜಾಣತನ, ಶೈಲಿ ಮುಂತಾದ ಅರ್ಥಗಳಿವೆ. ಆದರೆ, ಈ ಅರ್ಥಗಳು ಜನಪದ ಸಾಹಿತ್ಯದ
                                            ಅಧ್ಯಯನದಲ್ಲಿ ಹೆಚ್ಚು ಪ್ರಸ್ತುತವಾಗುತ್ತವೆ. ಈ ಪದಕ್ಕೆ, ನಿಗೂಢತೆ, ಒಗಟು ಮುಂತಾದ ಅರ್ಥಛಾಯೆಗಳೂ
                                            ಇವೆ. ನಮಗೆ ಈಗ ಅಂತಹ ಅರ್ಥಛಾಯೆಗಳೇ ಉಪಯುಕ್ತವಾಗಿದೆ. ಅಲ್ಲಮಪ್ರಭು ಅನೇಕ ಬೆಡಗಿನ ವಚನಗಳನ್ನು ರಚಿಸಿದ್ದಾನೆ.
                                            ಬೇರೆ ಕೆಲವು ವಚನಕಾರರೂ ಇಂತಹ ರಚನೆಗಳನ್ನು ಮಾಡಿದ್ದಾರೆ.
                                            
                                    
                                    
                                        ಈ ವಚನಗಳ ನಿಗೂಢತೆಯ ಕಾರಣವನ್ನು ಅಂದಿನ ಸಾಂಸ್ಕೃತಿಕ ಸನ್ನಿವೇಶದಲ್ಲಿಯೇ
                                            ಹುಡುಕಬೇಕು. ಆ ಕಾಲದಲ್ಲಿ, ಕೆಲವು ತಾತ್ವಿಕ ಪರಂಪರೆಗಳು ತಮ್ಮ ಅಸ್ತಿತ್ವವನ್ನು ಬಹಳ ಎಚ್ಚರಿಕೆಯಿಂದ
                                            ಕಾಪಾಡಿಕೊಳ್ಳಬೇಕಿತ್ತು. ರಾಜಕೀಯ ಅಧಿಕಾರವನ್ನು ಪಡೆದಿದ್ದ ಶಕ್ತಿಗಳಿಗೆ ಇಷ್ಟವಾಗದ, ನಂಬಿಕೆಗಳನ್ನು,
                                            ವಿಚಾರಧಾರೆಗಳನ್ನು ಪ್ರತಿಪಾದಿಸುತ್ತಿದ್ದ ಯಾವುದೇ ವ್ಯವಸ್ಥೆಯು, ರಹಸ್ಯಮಯವೂ ವಿದ್ರೋಹಾತ್ಮಕವೂ ಆದ
                                            ಉಪಾಯಗಳನ್ನು ಅನುಸರಿಸುವುದು ಅನಿವಾರ್ಯವಾಗಿತ್ತು. ಹೀಗೆ ಮಾಡುವುದು, ಅವರಿಗೆ ಅಸ್ತಿತ್ವದ ಪ್ರಶ್ನೆಯಾಗಿತ್ತು.
                                            ಇಂತಹ ವಿಚಾರಗಳ ಪ್ರಸಾರ/ಪ್ರಚಾರಗಳು
                                                ಕೂಡ ಅವುಗಳನ್ನು ನಿಜವಾಗಿಯೂ ನಂಬುವವರ ನಡುವೆಯೇ ನಡೆಯಬೇಕಿತ್ತು. ಚಾಡಿಕೋರರನ್ನು ನಂಬುವ ಹಾಗೆ ಇರಲಿಲ್ಲ.
                                                ಈ ಬಗೆಯ ನಿಗೂಢ ಪರಂಪರೆಗಳು ಭಾರತದ ತುಂಬಾ ತಮ್ಮ ವ್ಯಾಪ್ತಿಯನ್ನು ಹೊಂದಿದ್ದವು. ಅಲ್ಲಮನು ಇಂತಹ ಪರಂಪರೆಗಳ
                                                ನಿಕಟವಾದ ಪರಿಚಯವನ್ನು ಪಡೆದವನು. ಇವು ಇಂದಿಗೂ ಚಿಕ್ಕ ಪುಟ್ಟ ಗುಂಪುಗಳಾಗಿ ಅಸ್ತಿತ್ವದಲ್ಲಿವೆ. ಇಂತಹ
                                                ಪಂಥಗಳ ಅಭಿವ್ಯಕ್ತಿಯಲ್ಲಿ ಬರುವ ವಿವರಗಳಿಗೆ ಸಾಂಕೇತಿಕವಾದ ಅರ್ಥಗಳಿರುತ್ತವೆ. ಇಂತಹ ಸಂಕೇತ ವ್ಯವಸ್ಥೆಯನ್ನು
                                                ಬಲ್ಲ ಹಿರಿಯರು, ಆ ಅಭಿವ್ಯಕ್ತಿಯನ್ನು ಸಾಮಾನ್ಯ ಜನರಿಗೆ ವಿವರಿಸಿ ಹೇಳುತ್ತಾರೆ. ಅದೂ ಅಲ್ಲದೆ, ಇಂತಹ
                                                ವಿಚಾರಗಳು ಅನೇಕ ಸಂದರ್ಭಗಳಲ್ಲಿ ಬಹಳ ಉನ್ನತ ಮಟ್ಟದವೂ ಕೇವಲ ಅನುಭವವೇದ್ಯವೂ ಆಗಿರುತ್ತವೆ. ಜನಸಾಮಾನ್ಯರಿಗೆ
                                                ಅವು ಹೇಗೂ ನಿಲುಕುವುದಿಲ್ಲ. ಅದೇನೇ ಇರಲಿ, ಬೆಡಗಿನ ವಚನಗಳಿಗೆ ತಮ್ಮದೇ ಆದ ಸಾಹಿತ್ಯಕ ಸೌಂದರ್ಯವಿರುತ್ತದೆ.
                                                ಅವುಗಳ ಸಾಂಕೇತಿಕತೆಯ ಪರಿಚಯ ಇಲ್ಲದವರಿಗೂ ಅವು ಆಕರ್ಷಕವಾಗಿಯೇ ಕಾಣುತ್ತವೆ.
                                                
                                    
                                    
                                        ಬೆಡಗಿನ ವಚನಗಳಲ್ಲಿ ಮತ್ತು ಇಂತಹುದೇ ಇತರ ಬರವಣಿಗೆಯಲ್ಲಿ ಬಳಸುವ
                                            ಭಾಷೆಯನ್ನು ಸಂಧ್ಯಾಭಾಷಾ ಎಂದು ಕರೆಯುತ್ತಾರೆ. ಇದು ಯಾವುದೇ ಒಂದು ನಿರ್ದಿಷ್ಟ ಭಾಷೆಯ ಹೆಸರಲ್ಲ.
                                            ಬದಲಾಗಿ, ಅದು ಯಾವುದೇ ಭಾಷೆಯಲ್ಲಿ ಹೇಳಬಹುದಾದ ಸಂಕೇತಗಳ ವ್ಯವಸ್ಥೆ. ಓದುಗನಿಗೆ ಭಾಷೆ ಗೊತ್ತಿದ್ದರೆ
                                            ಸಾಲದು. ಅವನು ಆ ಸಂಕೇತಗಳ ವ್ಯವಸ್ಥೆಯ ಮೇಲೂ ಹಿಡಿತವನ್ನು ಪಡೆದಿರಬೇಕು. ಆಗ ಮಾತ್ರ, ಅವನು ಅಂತಹ
                                            ಕೃತಿಗಳ ಅರ್ಥವನ್ನು ಗ್ರಹಿಸಲು ಸಾಧ್ಯ. ಯೋಗ ಮತ್ತು ತಂತ್ರಗಳಿಗೆ ಸಂಬಂಧಿಸಿದ ಅನೇಕ ಪಠ್ಯಗಳು ಈ ರೀತಿಯ
                                            ಸಂಕೇತಗಳನ್ನು ವಿಪುಲವಾಗಿ ಬಳಸುತ್ತವೆ. ಅಂತಹ ಕೆಲವು ನಿದರ್ಶನಗಳನ್ನು ಇಲ್ಲಿ ಕೊಡಲಾಗಿದೆ:
                                    
                                        ಆನೆ=ಅಹಂಕಾರ, ಹಕ್ಕಿ=ಆತ್ಮ, ಆರು=ಮನೋದೇಹದಲ್ಲಿರುವ ಆರು ಚಕ್ರಗಳು, ಐದು=ಪಂಚೇಂದ್ರಿಯಗಳು ಇತ್ಯಾದಿ. ಈ ಅರ್ಥಗಳು ಹೆಚ್ಚು ಕಡಿಮೆ ನಿಯತವಾದವು.
                                                        ಸಾಮಾನ್ಯವಾಗಿ, ಬೆಡಗಿನ ವಚನವು ಒಂದು ಶಬ್ದಚಿತ್ರವನ್ನು ಕಟ್ಟಿಕೊಡುತ್ತದೆ. ಅದರಲ್ಲಿ, ಈ ಸಂಕೇತಗಳನ್ನು
                                                        ಅನಿರೀಕ್ಷಿತವೂ ನಿಗೂಢವೂ ಆದ ರೀತಿಯಲ್ಲಿ ಸಂಯೋಜಿಸಲಾಗಿರುತ್ತದೆ. ವಚನವನ್ನು ಓದಿದಾಗ, ದಿಕ್ಕುತೋಚದಂತೆ
                                                        ಆಗುವ ಓದುಗನು, ತನಗೆ ಸಹಜವಾದ ಲೌಕಿಕ ಜಗತ್ತಿನ ಪರಿಧಿಯಿಂದ ಹೊರಗೆ ಬರುತ್ತಾನೆ. ವಚನದ ತಿರುಳು ಏನಿರಬಹುದೆಂದು
                                                        ಊಹಿಸುವ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತಾನೆ. ಕೆಲವು ಬಾರಿ, ವಚನಕಾರನು ಇಂತಹ ಖಚಿತವಾದ ಸಂಕೇತಗಳನ್ನೂ
                                                        ಬಳಸುವುದಿಲ್ಲ. ಬದಲಾಗಿ ನಮಗೆ ಪರಿಚಿತವಾದ ಸಂಗತಿಗಳನ್ನೇ ಬಳಸಿ, ಅಸಂಗತವೆನಿಸುವ ಸನ್ನಿವೇಶವನ್ನು
                                                        ನಿರೂಪಿಸುತ್ತಾನೆ. ಅದು ಯಾವುದೇ ತರ್ಕಕ್ಕೆ ಬದ್ಧವಾಗಿರುವುದಿಲ್ಲ. ಅವು ಕಾರ್ಯ-ಕಾರಣಗಳ ಸಂಬಂಧವನ್ನು
                                                        ಒಪ್ಪಿಕೊಳ್ಳದೆ, ಬೇರೆ ರೀತಿಯಲ್ಲಿ ರಚಿತವಾಗಿರುತ್ತವೆ. ಅನುಭಾವಿಗಳಿಗೆ ಬರುವ ಸಮಸ್ಯೆಯೆಂದರೆ, ದಿನನಿತ್ಯದ,
                                                        ಪರಿಮಿತ ಶಕ್ತಿಯ ಭಾಷೆಯಲ್ಲಿ ಅದನ್ನು ಮೀರಿದ ಅನುಭವ-ಅನುಭಾವಗಳನ್ನು ಹೇಳುವುದು. ಈ ಸವಾಲನ್ನು ಎದುರಿಸಲು
                                                        ಜ್ಞಾನಿಗಳು ಕಂಡುಕೊಂಡ ದಾರಿಗಳಲ್ಲಿ ಬೆಡಗಿನ ವಚನಗಳೂ ಸೇರುತ್ತವೆ. 
                                                        
                                    
                                    
                                        ಬೆಡಗಿನ ವಚನಗಳು,
                                            ವಚನಗಳ ಪ್ರಧಾನ ಪರಂಪರೆಯ ಭಾಗವಾಗಿರಲಿಲ್ಲ. ಹಾಗೆ ಇರಬೇಕೆನ್ನುವುದು ಅವರ ಉದ್ದೇಶವೂ ಆಗಿರಲಿಲ್ಲ.
                                            ಅಲ್ಲಮಪ್ರಭುವಲ್ಲದೆ, ಚೆನ್ನಬಸವಣ್ಣ, ಮೋಳಿಗೆ ಮಾರಯ್ಯ, ಕೋಲ ಶಾಂತಯ್ಯ, ಅರಿವಿನ ಮಾರಿತಂದೆ, ಅಕ್ಕಮಹಾದೇವಿ,
                                            ಕದಿರೆ ರೆಮ್ಮವ್ವೆ ಮುಂತಾದ ಇತರ ಶರಣರೂ ಬೆಡಗಿನ ವಚನಗಳನ್ನು ರಚಿಸಿದ್ದಾರೆ. ಕಾಲ ಕಳೆದಂತೆ, ಇಂತಹ
                                            ವಚನಗಳು ಧರ್ಮಶಾಸ್ತ್ರಜ್ಞರ(ಥಿಯಾಲಜಿಸ್ಟ್ಸ್) ವ್ಯಾಖ್ಯಾನದ ವಸ್ತುಗಳಾಗಿ ಮಾರ್ಪಟ್ಟವು. ಅವರು ಅದನ್ನು
                                            ತಮ್ಮ ಉದ್ದೇಶಗಳಿಗೆ ಅನುಗುಣವಾಗಿ ಬದಲಿಸಿಕೊಂಡರು. ಈ ವಚನಗಳನ್ನು ಜನಸಾಮಾನ್ಯರ ಅಳವಿಗೆ ಬರುವಂತೆ
                                            ವಿವರಿಸುವುದೇ ಅವರ ಗುರಿಯಾಯಿತು. ಕಲ್ಲಮಠದ ಪ್ರಭುದೇವರು, ಮಹಾಲಿಂಗದೇವರು, ಸೋಮಶೇಖರ ಶಿವಯೋಗಿ ಮುಂತಾದವರು
                                            ಈ ರೀತಿಯ ವ್ಯಾಖ್ಯಾನಕಾರರ ಪರಂಪರೆಗೆ ಸೇರುತ್ತವೆ. 
                                        
                                    
                                    
                                        ನಮ್ಮ ಕಾಲದ, ಜಾತ್ಯತೀತ ಮನೋಭಾವದ ಸಾಮಾನ್ಯ ಓದುಗರಿಗೂ ಈ ವಚನಗಳು
                                            ಆಕರ್ಷಕವಾಗಿಯೇ ಇವೆ. ಅರ್ಥದ ಬಹುಮುಖೀ ಸಾಧ್ಯತೆಗಳು ಮತ್ತು ಅಲ್ಲಿ ಬಳಸಿರುವ ಪ್ರತಿಮಾವಿನ್ಯಾಸದ ಚೆಲುವುಗಳು
                                            ಇದಕ್ಕೆ ಕಾರಣ. ಇನ್ನು ಮುಂದೆ, ಒಂದೆರಡು ಬೆಡಗಿನ ವಚನಗಳನ್ನು ಯಾವುದೇ ವಿವರಣೆಯೂ ಇಲ್ಲದೆ ಕೊಡಲಾಗಿದೆ:
                                    
                                        
                                            ಐದು ಸರ್ಪಂಗಳಿಗೆ ತನುವೊಂದು ದಂತವೆರಡು
                                                ಸರ್ಪ ಕಡಿದು ಸತ್ತ ಹೆಣ ಸುಳಿದಾಡುವುದ ಕಂಡೆ
                                                
                                                ಈ ನಿತ್ಯವನರಿಯದ ಠಾವಿನಲ್ಲಿ
                                                ಭಕ್ತಿಯೆಲ್ಲಿಯದೋ ಗುಹೇಶ್ವರಾ||
                                    
                                    
                                        
                                    
                                    
                                        ಮುಂದಿನ ಓದು:
                                    
                                        
                                            - ಬೆಡಗಿನ ವಚನಗಳ ಪರಿಭಾಷಾಕೋಶ ಜಯಶ್ರೀ ದಂಡೆ, ಗುಲ್ಬರ್ಗ 
 
                                            - ಬೆಡಗಿನ ವಚನಗಳು ನೆಲೆ-ಹಿನ್ನೆಲೆ, ಜಿ.ಎಸ್. ಶಿವರುದ್ರಪ್ಪ,
                                                ಸಮಗ್ರ ಗದ್ಯಸಂಪುಟ, ಬೆಂಗಳೂರು. 
 
                                            - ಅಲ್ಲಮಪ್ರಭು ಮತ್ತು ಶೈವಪ್ರತಿಭೆ, ಡಿ.ಆರ್. ನಾಗರಾಜ್,
                                                1999, ಅಕ್ಷರ ಪ್ರಕಾಶನ, ಹೆಗ್ಗೋಡು. 
                                            
 
                                            - 
                                                Bedagina vachana parampare,